ಮುಖಪುಟ ರಾಜಕೀಯ ಮುಖಂಡರು
ಪ್ರಮುಖ ರಾಜಕೀಯ ಮುಖಂಡರು

ಸಮಾಜದ ರಾಜಕೀಯ ಮುಖಂಡರು

SADARA POLITICAL LEADERS

ಸಾತ್ವಿಕ ರಾಜಕಾರಣಿ ಶ್ರೀಮಾನ್ ದಿ. ಲಕ್ಷ್ಮೀನರಸಿಂಹಯ್ಯ ರವರು
ಮಾಜಿ ಮಂತ್ರಿಗಳು, ಮಾಜಿ ವಿಧಾನ ಪರಿಷತ್ ಸಭಾಪತಿಗಳು, ಕರ್ನಾಟಕ ಸರ್ಕಾರ


ತುಮಕೂರು ಜಿಲ್ಲೆ ಕಂಡ ಸಾತ್ವಿಕ ಗುಣಧರ್ಮಗಳ ಭಂಡಾರವಾಗಿದ್ದ ಕೀರ್ತಿಶೇಷ ಶ್ರೀ ಲಕ್ಷ್ಮೀನರಸಿಂಹಯ್ಯ ನವರು ದಿನಾಂಕ: ೦೭-೧೧-೧೯೩೫ ರಲ್ಲಿ ಕ್ಯಾತಸಂದ್ರಕ್ಕೆ ಹೊಂದಿಕೊಂಡಂತಿರುವ ಚೌಡಯ್ಯನಪಾಳ್ಯ ಗ್ರಾಮದಲ್ಲಿ ಸಜ್ಜನ ಚೌಡಯ್ಯನವರು ಮತ್ತು ಶ್ರೀಮತಿ ಸಾಕಮ್ಮ ನವರ ಪುತ್ರರತ್ನರಾಗಿ ಜನಿಸಿದರು. ಶ್ರೀಯುತರು ಕ್ಯಾತಸಂದ್ರದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ತುಮಕೂರಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡಿ ೧೯೫೮ ರಲ್ಲಿ ಎಲೆಕ್ಟ್ರಿಕಲ್ ಡಿಪ್ಲೋಮೋ ಇಂಜನಿಯರ ಪದವಿಧರರಾದರು. ಹುಟ್ಟೂರಿನ ಜನತೆಗೆ ಪ್ರೀತಿಯ ಲಚ್ಚಣ್ಣ ಆಗಿದ್ದ ಶ್ರೀಯುತರು ವಿದ್ಯಾರ್ಥಿ ದಿಸೆಯಿಂದಲೂ ಒಳ್ಳೆಯ ಪುಟ್‌ಬಾಲ್ ಆಟಗಾರರು. ಕ್ಯಾತಸಂದ್ರದಲ್ಲಿ ಫ್ರೆಂಡ್ಸ್ ಯೂನಿಯನ್ ಹೆಸರಿನಲ್ಲಿ ತಂಡಕಟ್ಟಿ, ರಾಜ್ಯಮಟ್ಟಕ್ಕೆ ಕೀರ್ತಿಯನ್ನು ಕೊಂಡೊಯ್ದ ಹಿರಿಮೆ ಅವರದು. ವೃತ್ತಿಗಾಗಿ ಕಮಲ ಎಲೆಕ್ಟ್ರಿಕಲ್ ಸ್ಟೋರ‍್ಸ್ ತುಮಕೂರಿನ ಅಶೋಕ ರಸ್ತೆಯಲ್ಲಿ ಪ್ರಾರಂಭಿಸಿ ಗ್ರಾಮಾಂತರ ಪ್ರದೇಶಗಳ ಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟು ಜನಾನುರಾಗಿಯಾದರು. ಕ್ರಮೇಣ ರಾಜಕೀಯರಂಗ ಪ್ರವೇಶಿಸಿದರು. ೧೯೬೯ರಲ್ಲಿ ಸಂಸ್ಥಾ ಕಾಂಗ್ರೆಸ್‌ನ ಸದಸ್ಯರಾದರು ತಮ್ಮ ಸರಳವಾದ ನಡೆ ನುಡಿಗಳಿಂದ ಎಲ್ಲರ ಮನಗೆದ್ದರು. ಜಯಪ್ರಕಾಶ್‌ನಾರಾಯಣರ ನೇತೃತ್ವದಲ್ಲಿ ಆರಂಭವಾದ ಜನತಾ ಪಕ್ಷದ ಜಿಲ್ಲಾ ನೇತಾರರಾಗಿ ಜಿಲ್ಲಾ ರಾಜಕೀಯರಂಗದ ಕಣ್ಮಣಿಗಳಾದರು. ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿ ೧೯೭೭ರ ತುರ್ತು ಪರಿಸ್ಥಿತಿಯಲ್ಲಿ ಬಂಧನಕ್ಕೆ ಒಳಗಾದರು. ಬೆಂಗಳೂರಿನ ಸೆಂಟ್ರಲ್ ಜೈಲ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ, ಜಾರ್ಜ್ ಫರ್ನಾಂಡೀಸ್, ರಾಮಕೃಷ್ಣ ಹೆಗಡೆ ಅವರೊಡಗೂಡಿಗೆ ಒಂದು ವರ್ಷಕ್ಕೂ ಮೇಲ್ಪಟ್ಟು ಜೈಲುಸೆರೆವಾಸ ಅನುಭವಿಸಿದರು.ಲಚ್ಚಣ್ಣನವರ ಆಪ್ತ ಸ್ನೇಹಿತರಲ್ಲಿ ಪ್ರಮುಖರಾದವರೆಂದರೆ ಶ್ರೀಯುತ ಆರ್.ಎಲ್. ಜಾಲಪ್ಪ, ಶ್ರೀಯುತ ಸಿದ್ದರಾಮಯ್ಯ, ಶ್ರೀಯುತ ಆರ್. ವಿ. ದೇಶಪಾಂಡೆ ರವರು. ೧೯೮೩ ರಲ್ಲಿ ಮೊದಲಬಾರಿಗೆ ಎಂ.ಎಲ್.ಎ.ಆಗಿ ಆಯ್ಕೆಯಾಗಿ ಉಪ ಸಭಾಪತಿಗಳಾಗಿ ಹಲವು ವರ್ಷಗಳಕಾಲ ಸೇವೆಯನ್ನು ಸಂದಾಯ ಮಾಡಿದರು. ರಾಜ್ಯ ಸರ್ಕಾರದ ವಿದ್ಯುತ್ ಖಾತೆ ರಾಜ್ಯ ಸಚಿವರಾಗಿ ಹಾಗೂ ಸಂಪುಟ ದರ್ಜೆ ಸಚಿವರಾಗಿ ರಾಮಕೃಷ್ಣ ಹೆಗಡೆಯವರ ಮಂತ್ರಿ ಮಂಡಲದಲ್ಲಿ ಲಕ್ಷ್ಮೀನರಸಿಂಹಯ್ಯ ರಾಜ್ಯದ ಉತ್ತಮ ಸಚಿವರೆನಿಸಿದರು. ಕೆಲಕಾಲ ತೋಟಗಾರಿಕೆ ಸಚಿವರಾಗಿಯೂ ಸೇವೆ ಸಂದಾಯ ಮಾಡಿದ ಹಿರಿಮೆ ಅವರದು. ರೈತಾಪಿ ಕುಟುಂಬದಿಂದ ಬಂದ ಇವರಿಗೆ ರೈತರ ಬಗ್ಗೆ ಅಪಾರವಾದ ಕಳಕಳಿಯಿತ್ತು. ಅವರು ತಮ್ಮ ಸೇವಾ ಅವಧಿಯಲ್ಲಿ ಗ್ರಾಮೀಣ ಜನರ ಪುರೋಭಿವೃದ್ಧಿಗಾಗಿ ಮಾಡಿದ ಘನಕಾರ್ಯಗಳು ಅತ್ಯಂತ ಸ್ಮರಣೀಯ. ರೈತರಿಗೆ, ಉದ್ಯಮಿಗಳಿಗೆ, ಸಾರ್ವಜನಿಕರಿಗೆ ತೃಪ್ತಿಕರವಾಗಿ ವಿದ್ಯುತ್ ಒದಗಿಸಿದ ಕೀರ್ತಿ ದಿವಂಗತರಿಗೆ ಸಲ್ಲುತ್ತದೆ. ೧೯೮೭ ರಲ್ಲಿ ವಿದ್ಯುತ್ ಮತ್ತು ಜಲವಿದ್ಯುತ್ ಯೋಜನೆಗಳ ರಾಜ್ಯ ಸಚಿವರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ ಧನ್ಯರಾದರು ಮಾನ್ಯರಾದರು. ಲಕ್ಷ್ಮೀನರಸಿಂಹಯ್ಯನವರು ಆಸ್ತಿಕರಾಗಿದ್ದು ಗುರು, ದೇವರುಗಳಲ್ಲಿ ಅಪಾರ ಭಕ್ತಿ ಗೌರವಾಧಾರಗಳನ್ನು ಇಟ್ಟುಕೊಂಡಿದ್ದರು. ಅವರ ಮನೆಯ ದೇವರು ಶೆಟ್ಟಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಪ್ರಾಂತಲ ಚಿತ್ತದಿಂದ ಕೈಗೆತ್ತಿಕೊಂಡು ಹಲವಾರು ವರ್ಷಗಳ ಕಾಲ ಜೀರ್ಣೋದ್ಧಾರ ಸಮಿತಿ ನೇತಾರರಾಗಿ ದುಡಿದ ಹೆಗ್ಗಳಿಕೆ ಅವರದ್ದು. ಮಾನ್ಯರಿಗೆ ಶ್ರೀ ಸಿದ್ಧಗಂಗಾ ಮಠ ಹಾಗೂ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳೆಂದರೆ ಅಪಾರ ಗೌರವ. ಅವರ ಬದುಕಿನ ಕೊನೆಯ ದಿನದ ತನಕ ಶ್ರೀಗಳೊಂದಿಗೆ ಅವಿನಾಭಾವ ಬಾಂಧವ್ಯವನ್ನು ಇರಿಸಿಕೊಂಡಿದ್ದರು. ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಎದ್ದಾಗ ಶ್ರೀ ಶ್ರೀಗಳ ಬೆಂಗಾವಲಿಗೆ ನಿಂತು ಶ್ರೀಯುತ ಲಕ್ಷ್ಮೀನರಸಿಂಹಯ್ಯನವರು ಅಂದಿನ ಮುಖ್ಯ ಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯವರ ಪ್ರೀತಿ ವಿಶ್ವಾಸವನ್ನು ಗಳಿಸಿ ಶ್ರೀ ಕ್ಷೇತ್ರದ ಪಾವಿತ್ರ್ಯ ಕಾಪಾಡಿದ ಹೆಗ್ಗಳಿಕೆ ಇವರದು. ಶ್ರೀಗಳ ಜನೋಪಕಾರ್ಯಗಳನ್ನು, ದಾಸೋಹದ ಮಹತ್ವವನ್ನು, ಅಕ್ಷರದಾನವನ್ನು, ಆಶ್ರಿತ ಗುಣವನ್ನು ಕಂಡ ಇವರು ಕ್ಷೇತ್ರದ ಅಪ್ಪಟ ಉತ್ಕಟಾಭಿಮಾನಿಗಳಾಗಿದ್ದರು. ಹುಟ್ಟೂರಿನ ಋಣ ತೀರಿಸಿದ ಜಿಲ್ಲಾ ರಾಜಕಾರಣಿಗಳ ಪಟ್ಟಯಲ್ಲಿ ಶ್ರೀ ಲಕ್ಷ್ಮೀನರಸಿಂಹಯ್ಯ ಮೊದಲಿಗರೆಂದರೆ ತಪ್ಪಾಗಲಾರದು. ತುಮಕೂರು ನಗರಕ್ಕೆ ಅಮೂಲ್ಯ ಕಾಣಿಕೆ ನೀಡಿ, ನಗರ ಹಾಗೂ ಜಿಲ್ಲಾ ಕೇಂದ್ರದ ಹಿರಿಮೆ ಹೆಚ್ಚಿಸಿದರು, ಇವರ ಕ್ರಿಯಾಶೀಲ ಶಕ್ತಿಯಿಂದ ಜಿಲ್ಲಾ ಕೇಂದ್ರವಾದ ತುಮಕೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರ ಕಛೇರಿ, ಆರ್.ಟಿ.ಓ. ಕಛೇರಿ ಕಟ್ಟಡ ನಿರ್ಮಾಣಗೊಂಡಿತು. ಜನರಲ್ ಆಸ್ಪತ್ರೆಗೆ ಕಾಯಕಲ್ಪ ನೀಡಿ, ಸಾಕಷ್ಟು ಸುಧಾರಣೆಗೊಳಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ರೂಪಿಸಿದ ಹೆಗ್ಗಳಿಕೆ ಇವರದ್ದು. ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ವೃತ್ತದಿಂದ ಕ್ಯಾತಸಂದ್ರದ ತನಕ ಬೀದಿ ದೀಪ ಬೆಳಗುವಂತೆ ಮಾಡಿ ತುಮಕೂರು ನಗರ ಅಭಿವೃದ್ಧಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಡಿದ ಸೇವೆ ಹೆಚ್ಚು ಸ್ಮರಣೀಯ. ನಗರಕ್ಕೆ ಕುಡಿಯುವ ನೀರು, ರೈತರ ಬೇಸಾಯದ ಜಮೀನಿಗೆ ನೀರು ಒದಗಿಸುತ್ತಿದ್ದ ಮೈದಾಳದ ಕೆರೆಗೆ ನೀರಿನ ಸಂಪನ್ಮೂಲ ಅಭಿವೃದ್ಧಿ ಪಡಿಸಲು ಫೀಡರ್ ಚಾನಲ್ ನಿರ್ಮಿಸಿದ ಕೀರ್ತಿ ಇವರದಾಗಿದೆ. ಸಾತ್ವಿಕ ರಾಜಕಾರಣಿ ಶ್ರೀಯುತ ಲಕ್ಷ್ಮೀನರಸಿಂಹಯ್ಯ ೧೯೮೭ ರಲ್ಲಿ ಅಖಿಲ ಕರ್ನಾಟಕ ೨೭ನೇಯ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಅರ್ಥ ಪೂರ್ಣವಾಗಿ ನಡೆಸಿದ ಕೀರ್ತಿ ಇವರದಾಗಿದೆ. ಸ್ಕೌಟ್ ಜಾಂಬೂರಿಯನ್ನು ರಾಜ್ಯಮಟ್ಟದಲ್ಲಿ ಅತ್ಯಂತ ಉನ್ನತ ಸ್ತರದಲ್ಲಿ ಆಯೋಜಿಸಿ, ಜಿಲ್ಲೆಗೆ ಕೀರ್ತಿತಂದ ಶಿಲ್ಪಿ ಇವರಾಗಿದ್ದಾರೆ. ಕಲೆ-ಸಾಹಿತ್ಯ-ಸಂಗೀತ-ಕ್ರೀಡೆ ಮುಂತಾದ ಹಲವು ಸಮ್ಮೇಳನ, ಕಾರ್ಯಾಗಾರ, ಶಿಬಿರಗಳನ್ನು ನಡೆಸಿದ ಹಿರಿಮೆ ಇವರದಾಗಿದೆ. ಶ್ರೀಯುತರು ತಮ್ಮ ಸಮಾಜ ಸಾದರ ಜನಾಂಗದ ಬಗ್ಗೆ ಅತ್ಯಂತ ಪ್ರೀತಿಯುಳ್ಳವರಾಗಿದ್ದರು. ಜನಾಂಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸದಾ ಮುಂದಾಗಿರುತ್ತಿದ್ದರು. ಸಾಮಾನ್ಯ ಜನರೊಂದಿಗೆ ಆಪ್ತವಾಗಿ ಬೆರೆಯುತ್ತಿದ್ದರು. ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದರು, ದೀನರ, ದಲಿತರ, ಅಶಕ್ತರ ಪಾಲಿಗೆ ನೆರವಾಗುತ್ತಿದ್ದ ಶ್ರೀ ಲಕ್ಷ್ಮೀನರಸಿಂಯ್ಯನವರು ಶ್ರೀ ಸಾಮಾನ್ಯರ ಪಾಲಿನ ಅಸಾಮಾನ್ಯ ನಾಯಕರಾಗಿ ಮಿಂಚಿದರು. ಅವರು ಶಾಸಕರಾಗಿ, ಸಚಿವರಾಗಿಯೂ ಶುದ್ಧ ಹಸ್ತರಾಗಿ ಸೇವೆ ಸಲ್ಲಿಸಿ ಯಾವುದೇ ಅಪವಾದಗಳಿಗೆ ಗುರಿಯಾಗದೆ ಹಿಂದುಳಿದ ವರ್ಗಗಳ ಧ್ವನಿಯಾಗಿ ನಿಂತರು. ಪ್ರತೀಕಾರಕ್ಕೆ ಪ್ರತೀಕಾದ ಮಾಡದ ಅವರ ಸ್ವಭಾವ ಅನುಕರಣೀಯ ಮಾತ್ರವಲ್ಲ; ಅಧಿಕಾರವಿದ್ದಾಗ ಬೀಗದೆ ಅಧಿಕಾರವಿಲ್ಲದಾಗ ಕುಗ್ಗದೆ ರಾಜಕೀಯ ರಂಗದಲ್ಲಿ ಸ್ಥಿತಪ್ರಜ್ಞರಾಗಿ ಬಾಳಿ, ಬೆಳಗಿದರು. ಶ್ರೀಯುತರು ಅನಾರೋಗ್ಯದ ಕಾರಣ ದಿನಾಂಕ: ೨೧-೧೨-೨೦೦೦ ರಂದು ನಮ್ಮನ್ನು ಅಗಲಿದರು. ೬೫ ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿದ ಸಜ್ಜನ ರಾಜಕಾರಣಿ ಅಪಾರ ಅಭಿಮಾನಿ ಬಳಗ ಮತ್ತು ಸಮಾಜದವರ ಪಾಲಿಗೆ ಸ್ಮರಣೀಯರಾದರು.

ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರುರವರು
ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ


ಡಾ||ಮುಖ್ಯಮಂತ್ರಿ ಚಂದ್ರು ಎಂಬ ಹೆಸರು ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಕಿರುತೆರೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಉತ್ತಮ ವಾಗ್ಮಿಗಳು, ಹಾಸ್ಯ ಪ್ರಜ್ಞೆಯುಳ್ಳವರೂ, ಸ್ನೇಹವಂತರು, ನೇರ ನಡೆ-ನುಡಿಗೆ ಹೆಸರಾದ, ಬದ್ಧತೆ-ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಂಕಷ್ಟದಲ್ಲಿ ಸ್ನೇಹಿತರಿಗಾಗಿ ಮರುಗುವ ಹೃದಯಂತ ಸಜ್ಜನ, ನಮ್ಮ ಚಂದ್ರುರವರು. ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರದ ಶ್ರೀಮತಿ ತಿಮ್ಮಮ್ಮ ಮತ್ತು ಶ್ರೀ ಎನ್.ನರಸಿಂಹಯ್ಯನವರ ೧ನೇಯವರಾಗಿ ಜನಸಿದ ಶ್ರೀಯುತ ಹೆಚ್.ಎನ್.ಚಂದ್ರಶೇಖರ್, ಮೂವರ ಸಹೋದರಿಯರ ತುಂಬು ಕುಟುಂಬ. ಜನನ: ೨೮-೦೮-೧೯೫೩ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹೊನ್ನಸಂದ್ರದಲ್ಲಿ, ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವೀಧರರಾದರು, ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದು. ೧೯೭೦ ರಿಂದಲೇ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ೧೯೮೩ ಜೂನ್ ೨೩ ರಂದು ಶ್ರೀಮತಿ ಚಂದ್ರಮ್ಮ ಮತ್ತು ಶ್ರೀ ಕೆ.ಆರ್.ದೊಡ್ಡರಂಗಯ್ಯ ಕಡವಿಗೆರೆ, ಇವರ ಪುತ್ರಿಯಾದ ಪದ್ಮಾರೊಂದಿಗೆ ವಿವಾಹವಾಯಿತು. ಭರತ್, ಶರತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಡಾ||ಮುಖ್ಯಮಂತ್ರಿ ಚಂದ್ರು- ಸ್ಥಾನಮಾನಗಳು: ೨೦೦೮: ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೧೦ : ಕನ್ನಡ ಪರ ಕಾಳಜಿ ಮತ್ತು ಹೋರಾಟವನ್ನು ಗಮನಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ೨೦೦೪-೨೦೧೦: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ೧೯೯೮-೨೦೦೪: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ೧೯೮೫-೧೯೯೦: ಶಾಸಕರು, ಕರ್ನಾಟಕ ವಿಧಾನ ಸಭೆ ೨೦೦೦: ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ ೧೯೯೫-೯೬: ಸದಸ್ಯರು, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ. ೧೯೯೮-೯೯: ಸದಸ್ಯರು, ಹಕ್ಕು ಭಾಧ್ಯತಾ ಸಮಿತಿ ೧೯೮೭-೮೯: ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ ೧೯೮೮: ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಪ್ರತಿನಿಧಿ ೧೯೮೭: ಲಂಡನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ೧೯೭೫-೧೯೮೫: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಅನುಭವ ಅಭಿನಯಿಸಿದ ಪ್ರಮುಖ ನಾಟಕಗಳು: ‘ಮುಖ್ಯಮಂತ್ರಿ’ ನಾಟಕದಲ್ಲಿ ಪ್ರಮುಖ ಪಾತ್ರನಾದ ಮುಖ್ಯಮಂತ್ರಿ ಪಾತ್ರವನನು (ಸುಮಾರು ೫೦೦ಕ್ಕೂ ಹೆಚ್ಚಿನ ಪ್ರದರ್ಶನಗಳು- ಕನ್ನಡ ರೂಪ.ಟಿ.ಎಸ್, ಲೋಹಿತಾಶ್ವ, ನಿರ್ದೇಶನ ಡಾ.ಬಿ.ವಿ.ರಾಜಾರಾಂ) ಯಶಸ್ವಿಯಾಗಿ ಅಭಿನಯಿಸಿದ್ದಕ್ಕಾಗಿ ‘ಮುಖ್ಯಮಂತ್ರಿ ಚಂದ್ರ’ ಎಂಬ ಹೆಸರು ಜನಪ್ರಿಯವಾಯಿತು. ಪ್ರಸನ್ನ ಅವರು ನಿರ್ದೇಶಿಸಿದ ಮ್ಯಾಕ್ಸಿಂಗಾರ್ಕಿ ಅವರ ‘ತಾಯಿ’ ನಾಟಕ. ಡಾ|| ಡಿ.ಆರ್.ನಾಗರಾಜ್ ಅವರು ರಚಿಸಿದ ವಾರ್ಡ್ ನಂ. ೬ ಆಧಾರಿತ, ಟಿ.ಎನ್.ನರಸಿಂಹನ್ ನಿರ್ದೇಶನದ ‘ಕತ್ತಲೆದಾರಿ ದೂರ’ ನಾಟಕ. ಡಾ|| ಬಿ.ಜಯಶ್ರೀ ಅವರು ನಿರ್ದೇಶಿಸಿದ ಹಾಗೂ ವಿಜಯ ತೆಂಡೂಲ್ಕರ್ ಅವರು ರಚಿಸಿದ ‘ಫಾಶೀರಾಮ್ ಕೊತ್ವಾಲ್’ ನಾಟಕ. ಚಲನಚಿತ್ರ: ೩ ದಶಕಗಳ ಕಾಲ ಚಲನಚಿತ್ರ ಕಲಾವಿದರಾಗಿ ಅಭಿನಯಿಸಿದ್ದಾರೆ. ಕೆಲವು ಚಲನಚಿತ್ರಗಳು ಚಕ್ರವ್ಯೂಹ, ಪಣಿಯಮ್ಮ, ಪ್ರಜಾಪ್ರಭುತ್ವ, ಗಜೇಂದ್ರ, ಶಬ್ದವೇಧಿ, ಗುರಿ, ಒಂದು ಮುತ್ತಿನ ಕಥೆ, ಕೋತಿಗಳ ಸಾರ್ ಕೋತಿಗಳು, ಸಿಂಧೂರ ತಿಲಕ, ಗೋಲ್‌ಮಾಲ್ ರಾಧಾಕೃಷ್ಣ, ಮುತ್ತಿನಹಾರ, ಗಣೇಶನ ಮದುವೆ, ಬೀಗರ ಪಂದ್ಯ, ಜ್ವಾಲಾಮುಖಿ, ಶಾಂತಿಕ್ರಾಂತಿ, ನಮ್ಮೂರ ರಾಜ, ಮಿಲನ, ಮಾಲಾಶ್ರೀ, ಪೋಲೀಸನ ಹೆಂಡತಿ, ಬೆಂಕಿ, ಚಾಣಕ್ಯ, ಇಂದ್ರನ ಗೆದ್ದ ನರೇಂದ್ರ, ಕಿತ್ತೂರು ಹುಲಿ, ಬಲಗಾಲಿಟ್ಟು ಒಳಗೆ ಬಾ, ಜಿದ್ದು, ಡಕೋಟ ಪಿಕ್ಚರ್ ಸೇರಿದಂತೆ ನಾಲ್ಕುನೂರ ಆರವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶ್ರೀಯುತರು ೧೯೭೦ ರಲ್ಲೇ ಬೆಂಗಳೂರಿನ ಸಮುದಾಯ ಭವನದ ಮೇಲ್ಚಾವಣಿಗಾಗಿ ಒಂದು ಕಲಾವಿದರ ಸಹಾಯಾರ್ಥ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿ ಹಣ ಸಂದಾಯ ಮಾಡಿರುತ್ತಾರೆ. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ೨೦೦೫ ರಲ್ಲಿ ತಮ್ಮ ವಿಶೇಷ ಅನುಧಾನದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿಲಯ ಕೊಠಡಿಗಳ ನಿರ್ಮಾಣಕ್ಕೆ ೨೦ ಲಕ್ಷ ರೂ, ಗೌರಿಬಿದನೂರು ಗ್ರಂಥಾಲಯಕ್ಕೆ ೧೫ ಲಕ್ಷ ರೂ, ತುಮಕೂರು ಸಮುದಾಯ ಭವನಕ್ಕೆ ೨೦ ಲಕ್ಷ ರೂಗಳ ಹಣ ಸಹಾಯ ನೀಡಿದ್ದಾರೆ. ೨೦೦೮ ರಲ್ಲಿ ಮಧುಗಿರಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ೧೫ ಲಕ್ಷ, ಶಿರಾದಲ್ಲಿ ಸಮುಧಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ, ಕೊರಟಗೆರೆ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ ಮತ್ತು ಕೊಡಗೇನಹಳ್ಳಿ ಸಮುದಾಯ ಭವನಕಾಗಿ ೧೦ ಲಕ್ಷರೂಗಳ ಅನುದಾನ ಸೇರಿ ಒಟ್ಟು ೧.೧೫ ಕೋಟಿ ರೂಗಳ ಹಣ ವಿನಿಯೋಗಿಸಿದ್ದಾರೆ. ಗೌರಿಬಿದನೂರು ಸಮತಾ ಪ್ರೌಢಶಾಲೆ ಸರ್ಕಾರದ ಅನುಧಾನಕ್ಕೆ ಒಳಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಯುತರು ಸದಾ ಕಾಲ ಸಂಘ ಸಮಾಜದ ಕಾರ್ಯಗಳಲ್ಲಿ ನೆರವಿನ ಮಹಾಪೂರವೇ ಹರಿಸಿದ್ದಾರೆಂದರೆ ತಪ್ಪಾಗಲಾರದು.